ತೈಲ - ಜೇಡು ಶಿಲೆ
 
ಜೇೀಡು ಮಣ್ಣು ಅಥವಾ ಮಡ್ಡಿ (ಗಸಿ) ಒಟ್ಟಾಗಿ ಸೇರಿದ ತೆಳುವಾದ ಪೊರೆ ಪೊರೆ ರಚನೆ ಇರುವ ಕಪ್ಪು  ಅಥವಾ ಕಂದು ಬಣ್ಣದ ಜಲಜಶಿಲೆ (ಆಯಿಲ್ ಶೇಲ್). ಇದು ವಿಶೇಷವಾಗಿ ಕೆರೊಗೆನ್ ಎಂಬ ಕಾರ್ಬನಿಕ ವಸ್ತು ಅಥವಾ ಬಿಟುಮೆನಿನಿಂದಾಗಿರುತ್ತದೆ. ಇದಲ್ಲದೆ ಬೆಣಚು, ಸಿಕತ, ಸಿಲಿಕಾಂಶ ಖನಿಜಗಳು ಅದರಲ್ಲಿಯೂ ಹೈಡ್ರೊಮೈಕ ಮತ್ತು ಮಾಂಟ್‍ಮೊರಿಲ್ಲೊನೈಟ್ ಜೇಡು ಖಿನಿಜಗಳು ಸಾಮಾನ್ಯವಾಗಿ ಇದರ ಸಂಯೋಜನೆಯಲ್ಲಿ ಇರುವುವು. ಜಲಜಶಿಲೆಗಳ ಜನನದ ಪೂರ್ವಭಾವಿ ಹಂತದಲ್ಲೇ (ಡಯಜೆನೆಸಿಸ್) ಜೇಡುಶಿಲೆ ರೂಪುಗೊಳ್ಳುವುದು. ಇದರಲ್ಲಿ ಫಿಲ್ಲೈಟ್ ಅಥವಾ ಮಾರ್ಕಸೈಟ್ ಮತ್ತು ಅಲ್ಪಾಂಶ ಫೆಲ್ಡ್‍ಸ್ಟಾರ್ ಸಹ ಇರುವುದು. ಈ ಕಾರ್ಬನಿಕ ವಸ್ತುಗಳನ್ನು ಬಟ್ಟಿ ಇಳಿಸಿದಾಗ ಕಲ್ಲರಳು (ಕಲ್ಲುರಾಳ) ಅಥವಾ ಪ್ಯಾರಫಿನ್ನಿನಿಂದ ಹಿಡಿದು ಮಂದವಾದ ಹೆರೆ ಎಣ್ಣೆ (ಲ್ಯೂಬ್ರಿಕೇಟಿಂಗ್ ಆಯಿಲ್), ಉರಿಸುವ ಎಣ್ಣೆ, ಹಗುರವಾದ ದೀಪದ ಎಣ್ಣೆ, ಸೀಮೆ ಎಣ್ಣೆ, ಮತ್ತು ಪೆಟ್ರೋಲ್ ಹಾಗೂ ಪೆಟ್ರೋಲ್ ಈಥರ್‍ವರೆಗಿನ ಹಲವಾರು ವಸ್ತುಗಳು ಉತ್ಪತ್ತಿಯಾಗುವುವು. ತೈಲಜೇಡುಶಿಲೆಯಿಂದ ಅಮೋನಿಯಮ್ ಸಹ ದೊರೆಯಬಹುದು. ಮೆಕ್ಕೀಯ ಹೇಳಿಕೆಯಂತೆ ನಿಜವಾದತೈಲ ಜೇಡುಶಿಲೆ ಜೇಡು ಅಥವಾ ಮರಳಿನ ಅಂಶದ ನಿಕ್ಷೇಪ; ಇದನ್ನು  ಬಟ್ಟಿ ಇಳಿಸಿದಾಗ ಪೆಟ್ರೋಲ್ ಉತ್ಪತ್ತಿಯಾಗುವುದು. ಕೇಲವ ದ್ರಾವಣಗಳೊಡನೆ ಬೆರೆಸುವುದರಿಂದಲ್ಲ. ತೈಲ-ಜೇಡು ಶಿಲೆಗಳಲ್ಲಿ ಮುಕ್ತ ಎಣ್ಣೆ ಇರದಿದ್ದರೂ ಶಾಕವಸ್ತುಗಳು, ಜಲಚರ ಸಸ್ಯಗಳ ಉಳಿಕೆ ಬೀಜಕಣಗಳು (ಸ್ಟೋರ್ಸ್) ಮೇಣದ ಕಣಗಳು ಮತ್ತು ರಾಳ ವಿಶೇಷವಾಗಿರುತ್ತವೆ. ಎಣ್ಣೆಯನ್ನು  ಉತ್ಪತ್ತಿಮಾಡುವ ಹಳದಿ ಸೂಕ್ಷ್ಮಕಣಗಳು ಪುಷ್ಪಪರಾಗ, ಆಲ್ಗೀ, ಬೀಜಕಣ ಮತ್ತು ಸೂಕ್ಷ್ಮಪ್ರಾಣಿಗಳ ಸಮೂಹ ಎಂದು ತಿಳಿದು ಬಂದಿದೆ. ಇವುಗಳಲ್ಲಿ ಅನೇಕವು ದ್ವಿತೀಯಕ ರೀತಿಯಲ್ಲಿ ರಾಳ ಮತ್ತು ಸೆಲ್ಯುಲೋಸ್ ಪದಾರ್ಥಗಳು, ಹಾಗೂ ಪುನರ್ನಿಕ್ಷೇಪಗೊಂಡ ವಸ್ತುಗಳು. ತೈಲ-ಜೇಡು ಶಿಲೆಗಳಲ್ಲಿ ಎಣ್ಣೆ ಹೆಚ್ಚು ಪ್ರಮಾಣವಿದ್ದಲ್ಲಿ ಬೆಂಕಿ ಹೊತ್ತಿಸಿದರೆ ಉರಿಯುತ್ತದೆ. ಬರ್ಮಾ-ತೈಲೆಂಡ್ ಅಂಚಿನಲ್ಲಿ ಕರೆನ್‍ಹಳ್ಳಿಯ ಜನ ತೈಲ-ಜೇಡು ಶಿಲೆಯನ್ನು ಉರಿಸಲು ಉಪಯೋಗಿಸುತ್ತಿದ್ದುದೇ ಯಥೇಚ್ಛವಾದ ನಿಕ್ಷೇಪಗಳನ್ನು ಪತ್ತೆ ಹಚ್ಚಲು ಮುಖ್ಯ ಸೂಚಿಯಾಯಿತು.

ಹಲವಾರು ದಶಲಕ್ಷವರ್ಷ ಒಂದೇ ಸವನೆ ಸಸ್ಯ ಮತ್ತು ಪ್ರಾಣಿಗಳ ಅವಶೇಷಗಳು ಮರಳು ಮತ್ತು ಜೇಡು ನಿಶ್ಚಲವಾದ ಸಿಹಿನೀರಿನ ಮತ್ತು ಉಪ್ಪುನೀರಿನ ಸರೋವರಗಳ ತಳದಲ್ಲಿ ನಿಕ್ಷೇಪಗೊಂಡಾಗ ತೈಲ-ಜೇಡು ಮೈದೆಳೆವುದು. ಪುರಾತನ ಶಿಲೆಗಳ ರಂಧ್ರಗಳಲ್ಲಿ ಸ್ವಚ್ಛವಾದ ನೀರು ಮತ್ತು ಅದರೊಂದಿಗೆ ಸಿಹಿನೀರಿನ ಚಿಪ್ಪುಗಳು, ಮೀನುಗಳು, ಸಸ್ಯಗಳ ಎಲೆಗಳು ಮತ್ತು ತೆರ್ಮೆ (ಜರಿ) ಎಲೆಗಳು ತುಂಬಿಕೊಂಡು ಒತ್ತಡ ಮತ್ತು ನಿರ್ವಾಯು ಕೊಳೆತದಿಂದ ಸಮ್ಮಿಶ್ರಿತ ಕಾರ್ಬನಿಕ ವಸ್ತು ಉತ್ಪತ್ತಿಯಾಗುವುದು. ಇದು ಕೂಡ ತೈಲ-ಜೇಡುಶಿಲೆ. ಕೆಳಬರ್ಮದ ಅಮ್‍ಹರ್‍ಸ್ಟ್ ಜಿಲ್ಲೆ ಮತ್ತು ಅಕ್ಕಪಕ್ಕದ ಥೈಲೆಂಡ್ ಭಾಗಗಳ ತೈಲ-ಜೇಡುಶಿಲೆಗಳು ಈ ರೀತಿ ಆದವು. ಇವು ತೃತೀಯ ಭೂಕಾಲಕ್ಕೆ ಸೇರಿವೆ. ಈ ರೀತಿಯ ನಿಕ್ಷೇಪಗಳು ಹ್ಟಿಚ್ಚಾರ ಪ್ರದೇಶದಲ್ಲಿವೆ. ಇದರಲ್ಲಿ 22.4 ಕಿಮೀ ಉದ್ದ, 14.4 ಕಿಮೀ ಅಗಲದ ಹಲವಾರು ಉತ್ತಮ ತೈಲ-ಜೇಡುಶಿಲಾ ಪದರಗಳಿವೆ. ಇವುಗಳ ಮಂದ ಏಕರೀತಿಯಾಗಿಲ್ಲ. ಈ ಶಿಲಾಮಾದರಿಗಳಲ್ಲಿ ಒಂದು ಟನ್ನಿಗೆ 9.78-16.2 ಗ್ಯಾಲನ್ನುಗಳಷ್ಟು ಕಚ್ಚಾ ಎಣ್ಣೆ ದೊರೆತಿದೆ. ಕೆಳ ಬರ್ಮದ ಮಗ್ರ್ಯು ಜಿಲ್ಲೆಯ ತೇಯಿನ್‍ಕುನ್ ಹೊಳೆಯ ಕಣಿವೆಯಲ್ಲಿ, ಬಾಂಕುನ್ ಬಳಿ ಮಗ್ರ್ಯುವಿನ ಲೆನ್ಯ ಕಣಿವೆಯಲ್ಲಿ ಮತ್ತು ಟವಾಯ್ ಜಿಲ್ಲೆಯ ಬೃಹತ್ ಟೆನಸ್ಸೆರಿಮ್ ಕಣಿವೆಯಲ್ಲಿ ತೃತೀಯ ಭೂಕಾಲದ ಜೇಡು ನಿಕ್ಷೇಪಗಳಿವೆ. ಭಾರತದಲ್ಲಿ ಕೆಳದರ್ಜೆಯ ತೈಲ-ಜೇಡುಶಿಲೆಗಳು ಪಂಜಾಬಿನ ಲವಣ ಶಿಲಾ ಶ್ರೇಣಿಯಲ್ಲಿ (ಸಾಲ್ಟ್ ರೇಂಜ್) ಉಪ್ಪು-ಮರಳು ಶಿಲೆಗಳೊಂದಿಗೆ ನಿಕ್ಷೇಪಗೊಂಡಿವೆ. ಆದರೆ ಇದು ಲಾಭದಾಯಕವಾಗಿಲ್ಲ.

ತೈಲ-ಜೇಡು ಶಿಲೆಗಳು ಪ್ರಪಂಚದ ಹಲವಾರು ಕಡೆ ಭೂಕಾಲದ ವಿವಿಧ ಹಂತಗಳಲ್ಲಿ ಉತ್ಪತ್ತಿಯಾಗಿವೆ. ಉದಾಹರಣೆಗಾಗಿ ಆಸ್ಟ್ರೇಲಿಯದ ನ್ಯೂ ಸೌತ್‍ವೇಲ್, ನ್ಯೂಜಿಲೆಂಡ್ ಮತ್ತು ಸ್ಕಾಟ್ಲೆಂಡ್ ದೇಶಗಳ ಕಾರ್ಬಾನಿಫೆರಸ್ ಯುಗದ ಶಿಲೆಗಳಲ್ಲಿ, ಬ್ರೆಜಿóಲ್‍ನ ಕ್ರಿಟೇಷನ್ ಯುಗದ ಶಿಲೆಗಳಲ್ಲಿ. ಉತ್ತರ ಅಮೇರಿಕ ಸಂಯುಕ್ತ ಸಂಸ್ಥಾನದ ಕೊಲರಾಡೊ, ಊಟಾ, ವ್ಯೋಮಿಂಗ್, ಮತ್ತು ನೆವಾಡ ಹಾಗೂ ಕೆನಡಾದ ನ್ಯೂ ಬ್ರನ್ಸ್‍ವಿಕ್ ಇಯೊಸೀನ್ ಉಪಯುಗದ ಶಿಲಾ ನಿಕ್ಷೇಪಗಳಲ್ಲಿ ಕಂಡುಬಂದಿದೆ.
ತೈಲ-ಜೇಡು ಶಿಲೆಗಳಿಂದ ಎಣ್ಣೆಯನ್ನು ಉತ್ಪಾದಿಸುವ ಕಾರ್ಯ ಬಹಳ ಹಿಂದೆಯೇ (1938) ಫ್ರಾನ್ಸಿನಲ್ಲಿ ಆರಂಭವಾಯಿತು. ಸ್ಕಾಟ್ಲೆಂಡಿನಲ್ಲಿ ಪ್ರಥಮ ಬಾರಿಗೆ 1848ರಲ್ಲಿ ಹೆಚ್ಚು ಪ್ರಮಾಣದಲ್ಲಿ ತೈಲ-ಜೇಡುಶಿಲೆಗಳಿಂದ ಕಚ್ಚಾಎಣ್ಣೆಯನ್ನು ಯಂಗ್ ಮತ್ತು ವೆಲ್‍ರನ್ ಬೇರ್ಪಡಿಸಿದರು. ಅನಂತರ 1860ರಲ್ಲಿ ಕೆನಡ, 1865ರಲ್ಲಿ ಆಸ್ಟ್ರೇಲಿಯ ದೇಶಗಳಲ್ಲಿ ಈ ವಿಧಾನಗಳಿಂದ ದಿನಕ್ಕೆ 3,000 ಬ್ಯಾರಲ್ಲುಗಳಷ್ಟು ಎಣ್ಣೆಯನ್ನು ಉತ್ಪಾದಿಸಲಾಯಿತು. ಆದರೂ ತೈಲ-ಜೇಡು ಶಿಲೆಗಳಿಂದ ಪಡೆಯಬಹುದಾದ ಎಣ್ಣೆಯ ಪ್ರಮಾಣ ಏಕರೀತಿಯಾಗಿರುವುದಿಲ್ಲ. 1 ಟನ್ ತೈಲ-ಜೇಡುಶಿಲೆಯಿಂದ ದೊರೆಯುವ ಎಣ್ಣೆಯ ಪ್ರಮಾಣ ಗ್ಯಾಲನ್ನುಗಳಲ್ಲಿ ಹೀಗಿದೆ:

ದಕ್ಷಿಣ ಆಫ್ರಿಕ	. . .	106
ಆಸ್ಟ್ರೇಲಿಯ	. . .	80-180
ಇಂಗ್ಲೆಂಡ್	. . .	40
ರಷ್ಯ	. . .	35-50
ಕೆನಡ	. . .	22-63
ಸ್ಕಾಟ್ಲೆಂಡ್	. . .	16-35
ಮಂಚೂರಿಯ	. . .	15
ಸ್ವೀಡನ್	. . .	12-15
ಜರ್ಮನಿ	. . .	12
ಅಮೇರಿಕ ಸಂಯುಕ್ತ ಸಂಸ್ಥಾನ	. . .	11-65
ಫ್ರಾನ್ಸ್	. . .	10-17

ತೈಲ-ಜೇಡುಶಿಲೆಯಿಂದ ಪೆಟ್ರೋಲಿಯಮ್ ಉತ್ಪಾದನೆಯ ರೀತಿ: ಪುಡಿ ಮಾಡಿದ ತೈಲ-ಜೇಡುಶಿಲೆಯನ್ನು ಬಟ್ಟಿ ಇಳಿಸುವ ಪಾತ್ರೆಯೊಳಕ್ಕೆ ಸೇರಿಸಿ, 3500-5000 ಉಷ್ಣತೆಯ ಆವಿ ಅಥವಾ ಅನಿಲವನ್ನು ಹಾಯಿಸಬೇಕು. ಆಗ ಕೆರೊಗೆನ್ ವಿಶ್ಲೇಷಣೆ ಹೊಂದಿ ಕಚ್ಚಾ ಎಣ್ಣೆ ಉತ್ಪತ್ತಿಯಾಗುವುದು. ಈ ಎಣ್ಣೆಗೆ ಪೆಟ್ರೋಲಿಯಮ್ ಎಣ್ಣೆಯ ಎಲ್ಲ ಗುಣಗಳೂ ಇವೆ. ಆದರೆ ಹೆಚ್ಚು ಅಂಶ ಗಂಧಕ, ಸಾರಜನಕ, ಮತ್ತು ಆಮ್ಲಜನಕ ಇರುವವು.

ಪೆಟ್ರೋಲಿಯಮ್ ಕೊರತೆಯನ್ನು ಪ್ರಪಂಚದ ಅನುಭವಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಎಣ್ಣೆ ಉತ್ಪಾದನೆಯ ದಿಶೆಯಲ್ಲಿ ತೈಲ-ಜೇಡುಶಿಲೆ ಅತಿ ಮುಖ್ಯವಾಗಬಲ್ಲದೆಂದು ತಜ್ಞರ ಒಮ್ಮತದ ಅಭಿಪ್ರಾಯ. ಆದ್ದರಿಂದ ಎಲ್ಲ ರಾಷ್ಟ್ರಗಳೂ ತೈಲ-ಜೇಡು ಶಿಲಾ ನಿಕ್ಷೇಪಗಳನ್ನು ಅರಸುವುದರಲ್ಲಿಯೂ ಅವುಗಳ ಪರಿಷ್ಕರಣ ಹಾಗೂ ಎಣ್ಣೆ ಉತ್ಪಾದನಾ ವಿಧಾನಗಳಲ್ಲಿಯೂ ನಿರ್ದಿಷ್ಟ ಧೋರಣೆಯನ್ನು ಅನುಸರಿಸುವುದು ಯುಕ್ತ. (ಎಂ.ಎನ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ